Monday, December 9, 2019

ಎಷ್ಟು ಸಾಹಸವಂತ ನೀನೇ ಬಲವಂತ Estu Saahasavanta neene balavanta

ಶ್ರೀ ವಾದಿರಾಜರ ಕೃತಿ 

 ಸುಂದರಕಾಂಡ ಸಂಗ್ರಹ 

 ರಾಗ ನವರೋಜ್             ಆದಿತಾಳ

ಎಷ್ಟು ಸಾಹಸವಂತ ನೀನೇ ಬಲವಂತ
ದಿಟ್ಟ ಮೂರುತಿ ಭಳಿಭಳಿರೇ ಹನುಮಂತ ॥ ಪ ॥
ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ
ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ ॥ ಅ ಪ ॥

ರಾಮರಪ್ಪಣೆಯಿಂದ ಶರಧಿಯ ದಾಟಿ
ಆ ಮಹಾ ಲಂಕೆಯ ಕಂಡೆ ಕಿರೀಟಿ
ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದಿ
ಈ ಮಹಿಯೊಳು ನಿನಗಾರೈ ಸಾಟಿ ॥ 1 ॥

ದೂರದಿಂದಸುರನ ಪುರವನ್ನು ನೋಡಿ
ಭರದಿ ಶ್ರೀರಾಮರ ಸ್ಮರಣೆಯ ಮಾಡಿ
ಹಾರಿದೆ ಹರುಷದಿ ಹರಿಸಿ ಲಂಕಿಣಿಯನು
ವಾರಿಜಮುಖಿಯನು ಕಂಡು ಮಾತಾಡಿ ॥ 2 ॥

ರಾಮರ ಕ್ಷೇಮವ ರಮಣಿಗೆ ಪೇಳಿ
ತಾಮಸ ಮಾಡದೆ ಮುದ್ರಿಕೆ ನೀಡಿ
ಪ್ರೇಮದಿ ಜಾನಕಿ ಕುರುಹನು ಕೊಡಲಾಗ
ಆ ಮಹಾವನದೊಳು ಫಲವನು ಬೇಡಿ ॥ 3 ॥

ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು
ಹಣ್ಣಿನ ನೆವದಲಿ ಅಸುರರ ಹೊಯ್ದು
ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ
ಬಣ್ಣಿಸಿ ಅಸುರರ ಬಲವನು ಮುರಿದು ॥ 4 ॥

ಶೃಂಗಾರ ವನದೊಳಗಿದ್ದ ರಾಕ್ಷಸರ
ಅಂಗವನಳಿಸಿದೆ ಅತಿರಣಶೂರ
ನುಂಗಿ ಅಸ್ತ್ರಗಳ ಅಕ್ಷಕುವರನ
ಭಂಗಿಸಿ ಬಿಸುಟೆಯೋ ಬಂದ ರಕ್ಕಸರ ॥ 5 ॥

ದೂರು ಪೇಳಿದರೆಲ್ಲಾ ರಾವಣನೊಡನೆ
ಚೀರುತ್ತ ಕರೆಸಿದ ಇಂದ್ರಜಿತುವನೆ
ಚೋರಕಪಿಯ ನೀ ಹಿಡಿತಹುದೆನ್ನುತ
ಶೂರರ ಕಳುಹಿದ ನಿಜಸುತನೊಡನೆ ॥ 6 ॥

ಪಿಡಿದನು ಇಂದ್ರಜಿತು ಕಡು ಕೋಪದಿಂದ
ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ
ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ
ನಡೆದನು ಲಂಕೆಯ ಒಡೆಯನಿದ್ದೆಡೆಗೆ ॥ 7 ॥

ಕಂಡ ರಾವಣನು ಉದ್ದಂಡಕಪಿಯನು
ಮಂಡೆಯ ತೂಗುತ ಮಾತಾಡಿಸಿದನು
ಭಂಡು ಮಾಡದೆ ಬಿಡೆ ನೋಡು ಕಪಿಯನೆ
ಗಂಡುಗಲಿಯು ದುರುದುರಿಸಿ ನೋಡಿದನು ॥ 8 ॥

ಛಲವ್ಯಾಕೋ ನಿನಗಿಷ್ಟು ಎಲೆ ಕೊಡಗನೆ
ನೆಲೆಯಾವುದ್ಹೇಳೋ ನಿನ್ನೊಡೆಯನ್ಹೆಸರನ್ನು
ಬಲವಂತ ರಾಮರ ಬಂಟ ಬಂದಿಹೆನೋ
ಹಲವು ಮಾತ್ಯಾಕೋ ಹನುಮನು ನಾನೇ ॥ 9 ॥

ಬಡ ರಾವಣನೆ ನಿನ್ನ ಬಡಿದು ಹಾಕುವೆನೋ
ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೋ
ಹುಡಿಯೇಳಿಸುವೆನೋ ಖುಲ್ಲ ರಕ್ಕಸನೆ
ತೊಡೆವೆನೋ ನಿನ್ನ ಪಣೆಯ ಅಕ್ಷರವ ॥ 10 ॥

ನಿನ್ನಂಥ ದೂತರು ರಾಮನ ಬಳಿಯೊಳು
ಇನ್ನೆಷ್ಟು ಮಂದಿ ಉಂಟು ಹೇಳೋ ನೀ ತ್ವರಿಯ
ನನ್ನಂಥ ದೂತರು ನಿನ್ನಂಥ ಪ್ರೇತರು
ಇನ್ನೂರು ಮುನ್ನೂರು ಕೋಟಿ ಕೇಳರಿಯಾ ॥ 11 ॥

ಕಡು ಕೋಪದಿಂದಲಿ ಖೂಳ ರಾವಣನು
ಸುಡಿರೆಂದ ಬಾಲವ ಸುತ್ತಿ ವಸನವನು
ಒಡೆಯನ ಮಾತಿಗೆ ತಡೆಬಡೆ ಇಲ್ಲದೆ
ಒಡನೆ ಮುತ್ತಿದರು ಗಡಿಮನೆಯವರು ॥ 12 ॥

ತಂದರು ವಸನವ ತಂಡತಂಡದಲಿ
ಒಂದೊಂದು ಮೂಟೆ ಎಂಭತ್ತು ಕೋಟಿಯಲಿ
ಚಂದದಿ ಹರಳಿನ ತೈಲದೊಳದ್ದಿಸಿ
ನಿಂದ ಹನುಮನು ಬಾಲವ ಬೆಳೆಸುತ ॥ 13 ॥

ಶಾಲು ಸಕಲಾತಿಯು ಸಾಲದೆಯಿರಲು
ಬಾಲೇರ ವಸ್ತ್ರವ ಸೆಳೆದು ತಾರೆನಲು
ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ
ಕಾಲಮೃತ್ಯುವ ಕೆಣಕಿದರಲ್ಲಿ ॥ 14 ॥

ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ
ಇಣಿಕಿನೋಡುತ ಅಸುರರನಣಕಿಸುತ
ಝಣಝಣಝಣರೆನೆ ಬಾಲದ ಗಂಟೆಯು
ಮನದಿ ಶ್ರೀ ರಾಮರ ಪಾದವ ನೆನೆಯುತ ॥ 15 ॥

ಮಂಗಳಂ ಶ್ರೀರಾಮಚಂದ್ರಮೂರುತಿಗೆ
ಮಂಗಳಂ ಸೀತಾದೇವಿ ಚರಣಂಗಳಿಗೆ
ಮಂಗಳವೆನುತ ಲಂಕೆಯಸುಟ್ಟು
ಲಂಘಿಸಿ ಅಸುರನ ಗಡ್ದಕೆ ಹಿಡಿದ ॥ 16 ॥

ಹತ್ತಿತು ಅಸುರನ ಗಡ್ಡ ಮೀಸೆಗಳು
ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು
ಚಿತ್ತದಿ ರಾಮರು ಕೋಪಿಸುವರು ಎಂದು
ಚಿತ್ರದಿ ನಡೆದನು ಅರಸನಿದ್ದೆಡೆಗೆ ॥ 17 ॥

ಸೀತೆಯ ಕ್ಷೇಮವ ರಾಮರಿಗ್ಹೇಳಿ
ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ
ಸೇತುವೆ ಕಟ್ಟಿ ಚದುರಂಗ ಬಲಸಹ
ಮುತ್ತಿತು ಲಂಕೆಯ ಸೂರೆಗೈಯುತಲಿ ॥ 18 ॥

ವೆಗ್ಗಳವಾಯಿತು ರಾಮರ ದಂಡು
ಮುತ್ತಿತು ಲಂಕೆಯ ಕೋಟೆಯ ಕಂಡು
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ
ಝಗ್ಗನೆ ಪೇಳ್ದರು ರಾವಣಗಂದು ॥ 19 ॥

ರಾವಣ ಮೊದಲಾದ ರಾಕ್ಷಸರ ಕೊಂದು
ಭಾವಶುದ್ಧದಲಿ ವಿಭೀಷಣ ಬಾಳೆಂದು
ದೇವಿ ಸೀತೆಯನೊಡಗೊಂಡಯೋಧ್ಯದಿ
ದೇವ ಶ್ರೀರಾಮರು ರಾಜ್ಯವಾಳಿದರು ॥ 20 ॥

ಶಂಖದೈತ್ಯನ ಕೊಂದೆ ಶರಣು ಶರಣಯ್ಯ
ಶಂಖಗಿರಿಯಲಿ ನಿಂದೆ ಹನುಮಂತರಾಯ
ಪಂಕಜಾಕ್ಷ ಹಯವದನನ ಕಟಾಕ್ಷದಿ
ಬಿಂಕದಿ ಪಡೆದೆಯೋ ಅಜನಪದವಿಯ ॥ 21 ॥

ಫಲವಿದು ಬಾಳ್ದ್ದುದಕೆ Phalavidu baldudake

ಜಗನ್ನಾಥದಾಸರು

ಫಲವಿದು ಬಾಳ್ದ್ದುದಕೆ |ಪ|
ಸಿರಿ ನಿಲಯನ ಗುಣಗಳ ತಿಳಿದು ಭಜಿಸುವುದೆ |ಅ.ಪ.|
ಸ್ವೋಚಿತ ಕರ್ಮಗಳಾಚರಿಸುತ ಬಹು
ನೀಚರಲ್ಲಿಗೆ ಪೋಗಿ ಯೊಚಿಸದೆ
ಖೇಚರವಾಹ ಚರಾಚರ ಬಂಧಕ
ಮೋಚಕನಹುದೆಂದ್ಯೋಚಿಸುತಿಪ್ಪುದೆ 1
ನಿಚ್ಚ ಸುಭಕುತಿಯಲಚ್ಯುತನಂಘ್ರಿಗ
ತುಚ್ಚ ವಿಷಯಗಳ ಇಚ್ಛಿಸದೆ ಯ
ದೃಚ್ಛಾಲಾಭದಿಂ ಪ್ರೋಚ್ಚನಾಗುವುದೆ 2
ಮನೋವಾಕ್ಕಾಯದನುಭವಿಸುವ ದಿನ
ದಿನದಿ ವಿಷಯ ಸಾಧನಗಳಿಗೂ
ಅನಿಶಾಂತರ್ಗತ ವನರುಹದಳ ಲೋ
ಚನಗರ್ಪಿಸಿ ದಾಸನು ನಾನೆಂಬುದೇ 3
ವಾಸವ ಮುಖ ವಿಬುಧಾಸುರ ನಿಚಯಕೆ
ಈ ಸಮಸ್ತ ಜಗಕೀಶ ಕೇಶವಾ
ನೀಶ ಜೀವರೆಂಬ ಸುe್ಞÁನವೆ 4
ಪಂಚ ಭೇದಯುತ ಪ್ರಪಂಚವು ಸತ್ಯ ವಿ
ಭವ ಮುಖ ಬಲಿ ವಂಚಕಗೆ
ಸಂಚಲ ಪ್ರತಿಮೆ ಅಚಂಚಲ ಪ್ರಕೃತಿಯು
ಸಂಚಿಂತಿಸಿ ಮುದ ಲಾಂಭಿತನಹುದೆ 5
ಪಂಚ ಋತುಗಳಲಿ ಪಂಚಾಗ್ನಿಗಳಲಿ
ಪಂಚ ಪಂಚರೂಪವ ತಿಳಿದು
ಪಂಚ ಸುಸಂಸ್ಕಾರಾಂಚಿತನಾಗಿ ದ್ವಿ
ಪಂಚ ಕರಣದಲಿ ಪಂಚಕನರಿವುದೆ 6
ಹೃದಯದಿ ರೂಪವು ವದನದಿ ನಾಮವು
ಉದರದಿ ನೈವೇದ್ಯವು ಶಿರದಿ
ಪದ ಜಲ ನಿರ್ಮಾಲ್ಯವನೆ ಧರಿಸಿ ಕೋ
ಸದನ ಹೆಗ್ಗದವ ಕಾಯುವುದೆ 7
ಪಾತ್ರರ ಸಂಗಡ ಯಾತ್ರೆ ಚರಿಸುತ ವಿ
ಧಾತೃ ಪಿತನ ಗುಣ ಸ್ತೋತ್ರಗಳಾ
ಶ್ರೋತ್ರದಿ ಸವಿದು ವಿಚಿತ್ರಾನಂದದಿ
ಗಾತ್ರವ ಮರೆದು ಪರತ್ರವ ಪಡೆವುದೆ 8
ಹಂಸ ಮೊದಲು ಹದಿನೆಂಟು ರೂಪಗಳ
ಸಂಸ್ಥಾನವ ತಿಳಿದನುದಿನದಿ
ಸಂಸೇವಿಸುವ ಮಹಾಪುರುಷರ ಪದ
ಪಾಂಸುವ ಧರಿಸಿ ಅಸಂಶಯನಪ್ಪುದೆ 9
ವರ ಗಾಯಿತ್ರೀ ನಾಮಕ ಹರಿಗೀ
ರೆರಡಂಘ್ರಿಗಳ ವಿವರವ ತಿಳಿದು
ತರುವಾಯದಿ ಷಡ್ವಿಧ ರೂಪವ ಸಾ
ಅನುದಿನ ಧ್ಯಾನಿಸುತಿಪ್ಪುದೆ 10
ಬಿಗಿದ ಕಂಠದಿಂ ದೃಗ್ಭಾಷ್ಪಗಳಿಂ
ನಗೆ ಮೊಗದಿಂ ರೋಮಗಳೊಗೆದು
ಮಿಗೆ ಸಂತೋಷದಿಂ ನೆಗೆದಾಡುತ ನಾ
ಲ್ಮೊಗನಯ್ಯನ ಗುಣ ಪೊಗಳಿ ಹಿಗ್ಗುವುದೆ 11
ಗೃಹಕರ್ಮವ ಬ್ಯಾಸರದಲೆ ಪರಮೋ
ತ್ಸಹದಲಿ ಮಾಡುತ ಮೂಜಗದ
ಮಹಿತನ ಸೇವೆ ಇದೆ ಎನುತಲಿ ಮೋದದಿ
ಅಹರಹರ್ಮನದಿ ಸಮರ್ಪಿಸುತಿಪ್ಪುದೆ12
ಕ್ಲೇಶಾನಂದಗಳೀಶಾಧೀನ ಸ
ಮಾಸಮ ಬ್ರಹ್ಮ ಸದಾಶಿವರೂ
ಈಶಿತವ್ಯರು ಪರೇಶನಲ್ಲದೆ
ಶ್ವಾಸ ಬಿಡುವ ಶಕ್ತಿ ಲೇಸಿಲ್ಲೆಂಬುದೆ 13
ಏಕೋತ್ತರ ಪಂಚಾಶದ್ವರ್ಣಗ
ಳೇಕಾತ್ಮನ ನಾಮಂಗಳಿವು
ಸಾಕಲ್ಯದಿಯಿವರರಿಯರೆಂಬುದೆ 14
ಒಂದು ರೂಪದೊಳನಂತ ರೂಪವು
ಪೊಂದಿಪ್ಪವು ಗುಣಗಳಾ ಸಹಿತ
ಇಂದು ಮುಂದೆಂದಿಗು ಗೋ
ವಿಂದಗೆ ಸರಿಮಿಗಿಲಿಲ್ಲೆಂತೆಂಬುದೆ 15
ಮೇದಿನಿ ಪರಮಾಣಂಬು ಕಣಂಗಳ
ನೈದಬಹುದು ಪರಿಗಣನೆಯನು
ಮಾಧವನಾನಂದಾದಿ ಗುಣಂಗಳ
ನಾದಿ ಕಾಲದಲಿ ಅಗಣಿತವೆಂಬುದೆ 16
ಹರಿಕಥೆ ಪರಮಾದರದಲಿ ಕೇಳುತ
ಮರೆದು ತನುವ ಸುಖ ಸುರಿವುತಲೀ
ಉರುಗಾಯನ ಸಂದರುಶನ ಹಾರೈ
ಸಿರುಳು ಹಗಲು ಜರಿ ಜರಿದು ಬಾಳ್ವುದೆ 17
ಆ ಪರಮಾತ್ಮಗೆ ರೂಪದ್ವಯವು ಪ
ರಾಪರ ತತ್ತ್ವ ಗಳಿದರೊಳಗೆ
ಸ್ತ್ರಿ ಪುಂ ಭೇದದಿ ಈ ಪದ್ಮಜಾಂಡವ
ವ್ಯಾಪಿಸಿಹನೆಂದೀಪರಿ ತಿಳಿವುದೆ 18
ವಿಷಯೇಂದ್ರಿಯಗಳಲಿ ತದಭಿಮಾನಿ ಸುಮ
ನಸರೊಳು ನಿಂದು ನಿಯಾಮಿಸುತಾ
ವಾಸುದೇವ ತಾ
ವಿಷಯಂಗಳ ಭೋಗಿಸುವನೆಂದರಿವುದೆ 19
ಮೂಜಗದೊಳಗಿಹ ಭೂ ಜಲ ಖೇಚರ
ಈ ಜೀವರೊಳೊ ಮಹೌಜಸನ
ಪೂಜಿಸುತನುದಿನ ರಾಜಿಸುತಿಪ್ಪುದೆ 20
ಗುಣಕಾಲಾಹ್ವಯ ಆಗಮಾರ್ಣವ ಕುಂ
ಭಿಣಿ ಪರಮಾಣ್ವಾಂಬುಧಿಗಳಲಿ
ವನಗಿರಿ ನದಿ ಮೊದಲಾದದರೊಳಗಿಂ
ಧನಗತ ಪಾವಕನಂತಿಹನೆಂಬುದೆ 21
ಅನಳಾಂಗಾರನೊಳಿದ್ದೋಪಾದಿಯ
ಲನಿರುದ್ಧನು ಚೇತನರೊಳಗೆ
ಕ್ಷಣ ಬಿಟ್ಟಗಲದೆ ಏಕೋ ನಾರಾ
ಯಣ ಶ್ರುತಿ ಪ್ರತಿಪಾದ್ಯನು ಇಹನೆಂಬುದೆ 22
ಪಕ್ಷಗಳಕ್ಷಿಗಳಗಲದಲಿಪ್ಪಂ
ತ್ಯಕ್ಷರ ಪುರುಷನಪೇಕ್ಷೆಯಲಿ
ಕುಕ್ಷಿಯೊಳಬ್ಜಜ ತ್ರ್ಯಕ್ಷಾದ್ಯಮರರ
ಈಕ್ಷಿಸಿ ಕರುಣದಿ ರಕ್ಷಿಪನೆಂಬುದೆ 23
ಕಾರಣ ಕಾರ್ಯಾಂತರ್ಗತ ಅಂಶವ
ತಾರಾವೇಶಾಹಿತ ಸಹಜಾ
ಪ್ರೇರಕ ಪ್ರೇರ್ಯಾಂಹ್ವಯ ಸರ್ವತ್ರ ವಿ
ಕಾರವಿಲ್ಲದಲೆ ತೋರುವನೆಂಬುದೆ 24
ಸ್ತುತಿಸುತ ಲಕ್ಷ್ಮೀ ಪತಿಗುಣವ
ಕೃತಿಪತಿ ಸೃಷ್ಟಿ ಸ್ಥಿತಿಲಯ ಕಾರಣ
ಇತರ ಸರ್ವ ದೇವತೆಗಳಿಗಿನಿತಿಲ್ಲೆಂಬುದೆ25
ಪವನ ಮತಾನುಗರವ ನಾನಹುದೆಂ
ದವನಿಯೊಳಗೆ ಸತ್ಕವಿ ಜನರ
ಭವನಂಗಳಲಿ ಸಂಚರಿಸುತ ಸುಕಥಾ
ಶ್ರವಣವ ಮಾಡುತ ಪ್ರವರನಾಗುವುದೆ26
ಪನ್ನಗಾಚಲ ಸನ್ನಿವಾಸ ಪಾ
ವನ್ನಚರಿತ ಸದ್ಗುಣಭರಿತಾ
ಜನ್ಯಜನಕ ಲಾವಣ್ಯೇಕನಿಧಿ ಜ
ಗನ್ನಾಥವಿಠಲಾನಾನ್ಯಪನೆಂಬುದೆ 27

Thursday, December 5, 2019

ಎಂತು ಪೊಗಳಲೊ ನಿನ್ನ Entu pogaLalo ninna

ಶ್ರೀ ವ್ಯಾಸರಾಯರ ಕೃತಿ 

ರಾಗ ಹಿಂದೋಳ      ಖಂಡಛಾಪುತಾಳ 

ಎಂತು ಪೊಗಳಲೊ ನಿನ್ನ ಯತಿಕುಲ ಶಿರೋರನ್ನ ॥ ಪ ॥
ಶಾಂತ ಮಧ್ವಾಚಾರ್ಯ ಸಂತ ಕುಲವರ್ಯ ॥ ಅ.ಪ ॥

ಪ್ರಥಮಾವತಾರದಲಿ ವ್ರತದಿ ರಾಮರ ಭಜಿಸಿ ।
ಅತಿ ಪಂಥದಿಂದ ಶರಧಿಯನು ದಾಟಿ ॥
ಕ್ಷಿತಿಜೆಗಂಕಿತವಿತ್ತು ಪೂದೋಟವನು ಕಿತ್ತೆ ।
ಪ್ರತಿಗಾಣೆ ನಿನಗೆ ಅಪ್ರತಿಮ ಪರಾಕ್ರಮಿಯೆ ॥ 1 ॥

ದ್ವಿತಿಯಾವತಾರದಲಿ ದೇವಕೀಜನ ಕಂಡು ।
ಸತಿಗೆ ಕಾಮಿಸಿದವನ ಸಾಹಸದಿ ಸದೆದೆ ॥
ಪ್ರತಿಯಾದ ಮಾಗಧನ ಪೃತನದಲಿ ನೀ ಕೊಂದೆ ।
ಪ್ರತಿಯ ಕಾಣೆನೊ ನಿನಗೆ ಮೂರ್ಜಗದೊಳಗೆ ॥ 2 ॥

ತೃತಿಯಾವತಾರದಲಿ ತ್ರಿಜಗ ನುತಿಸಲು ಬಂದು ।
ಯತಿಯಾಗಿ ಮಹಾಮಹಿಮನನು ಭಜಿಸಿದೆ ॥
ಕ್ಷಿತಿಗಧಿಕ ಉಡುಪಿಯಲಿ ಕೃಷ್ಣನ್ನ ನಿಲಿಸಿ ।
ಪ್ರತಿಮತಮತವ ಮುರಿದೆ ಪೂರ್ಣಪ್ರಜ್ಞ ಮುನಿವರನೆ ॥ 3 ॥

Wednesday, December 4, 2019

ಜಗವು ನಿನ್ನೊಳಗೆ ನೀನು ಎನ್ನೊಳಗೆ Jagavu ninnolage neenu ennolage

ಜಗವು ನಿನ್ನೊಳಗೆ ನೀನು ಎನ್ನೊಳಗೆ
ಜಗಕೆ ಬಲ್ಲಿದ ನೀನು ನಿನಗೆ ಬಲ್ಲಿದ ನಾನು
ಜಗವ ಸುತ್ತಿಹುದೆಲ್ಲ ಮಾಯೆಯಯ್ಯ
ನಿನ್ನ ಸುತ್ತಿಹುದೆಲ್ಲ ಎನ್ನ ಮಾಯೆಯಯ್ಯ
ಕರಿಯು ಕನ್ನಡಿಯೊಳು ಅಡಗಿಹತೆರನಂತೆ
ನೀ ಎನ್ನೊಳು ಆದಗಿರೋ ಪುರಂದರವಿಠಲ

ಮನೆಯಲ್ಲಿ ವಿಪ್ರಪಾದೋದಕದ ಹೆಸರಿಲ್ಲದಿದ್ದರೆ Maneyalli vipra paadodakada hesarilladiddare

ಮನೆಯಲ್ಲಿ ವಿಪ್ರಪಾದೋದಕದ ಹೆಸರಿಲ್ಲದಿದ್ದರೆ
ಮನೆಯಲ್ಲಿ ವೇದ ಶಾಸ್ತ್ರಧ್ವನಿ ಗರ್ಜಿಸದಿದ್ದರೆ ಮತ್ತೆ
ಮನೆಯಲ್ಲಿ ಸ್ವಾಹಾಕಾರ ಸ್ವಧಾಕಾರ ಮಾಡುವದಿಲ್ಲದಿದ್ದರೆ
ಆ ಮನೆ ಸ್ಮಶಾನಕೆ ಸಮವೆಂಬ ಪುರಂದರವಿಠಲ

ದೇಹ ಜೀರ್ಣವಾಯಿತು ಧನದಾಹ ಜೀರ್ಣವಾಗದು ಕೃಷ್ಣಾs Deha jeernavaayitu dhanadaha jeernavaagadu krishna

ದೇಹ ಜೀರ್ಣವಾಯಿತು ಧನದಾಹ ಜೀರ್ಣವಾಗದು ಕೃಷ್ಣಾs I

ಅಯ್ಯಾ ಕಣ್ಣು ಕಿವಿ ಮಂದವಾದವು ಹೆಣ್ಣು ಮಣ್ಣಿನಾಸೆ ಮಂದವಾಗದು ಕೃಷ್ಣಾs I

ಕಾಲು ಕೈ ಜವಗುಂದಿದವು ಭೋಗಲೋಲತೆ ಜವಗುಂದವು ಕೃಷ್ಣಾs I

ಜರೆ ರೋಗದಿಂದ ನೆರೆಹೊರೆ ಹೇಸಿತು ಈ ಶರೀರದಲ್ಲಿ ಹೇಸಿಕೆ ಇನಿತಿಲ್ಲ I

ನನ್ನ ದೇಹ ಪಾಪಕೋಟಿಗಳ ಮಾಡಿದರಿನ್ನು ತಾಪ ಮನದೊಳಗಿನಿತಿಲ್ಲ I

ಹೀಗೆ ಸಂದು ಹೋಯಿತು ಕಾಲವೆಲ್ಲವು ಮುಂದಣಗತಿ ದಾರಿ ತೋರದು ಕೃಷ್ಣಾss I

ಅನಾದಿಯಿಂದ ನಿನ್ನವನೆನಿಸಿದೆ ಎನ್ನ ಕುಂದು ನಿನ್ನದಲ್ಲವೆ ಇನ್ನಾದರು ದಯೆಯಿಂದೆನ್ನ ನೋಡಿ ಮನ್ನಿಸಬೇಕಯ್ಯ ಸಿರಿಕೃಷ್ಣಾss II

---- ಶ್ರೀ ವ್ಯಾಸರಾಜರ ರಚನೆಯ ಒಂದು ಅದ್ಭುತವಾದ ಕೃತಿ ( ಉಗಾಭೋಗ)

ತಪ್ಪು ನೋಡದೆ ಬಂದೆಯಾ Tappu nodade bandeya

ತಪ್ಪು ನೋಡದೆ ಬಂದೆಯಾ ಎನ್ನಯ ತಂದೆ
ತಪ್ಪು ನೋಡದೆ ಬಂದೆಯಾ ||ಪ||

ಆ ಪಾದ ಮೌಳಿ ಎನ್ನೋಳು ಅಘ ಬಹಳ
ಶ್ರೀಪತಿ ಕಾಯ್ದೆಯಾ ಉದಧಿ್ದ್ದೆಯಾ ||೧||

ಜಗದಘಹರನೆಂಬೊ ನಿನ್ನಯ ಬಿರುದು|
ತ್ರಿಗುಣಾತೀತನೆ ರಾಮನೆ ಗುಣಧಾಮನೆ ||೨||

ಇಂದೆನ್ನ ಕಲುಷವಾರಿಸೊ ಭವತಾರಿಸೋ|
ಪ್ರಸನ್ನವೆಂಕಟ ರಮಣಾ ಭಯ ಶಮನಾ ||೩|

ಕರುಣಿಸೋ ರಂಗಾ ಕರುಣಿಸೋ Karuniso ranga karuniso

ಕರುಣಿಸೋ ರಂಗಾ ಕರುಣಿಸೋ||3||
ಹಗಲು ಇರಳು ನಿನ್ನ||3||
ಸ್ಮರಣೆ ಮರೆಯದಂತೆ||ಹಗಲು||
ಕರುಣಿಸೋ ರಂಗಾ ಕರುಣಿಸೋ
ಕ್ರಷ್ಣಾ ಕರುಣಿಸೋ ,ರಂಗಾ ಕರುಣಿಸೋ

ರುಕ್ಮಾಂಗದನಂತೆ ವ್ರತವ ನಾನರಿಯೆನು||2||
ಶುಕಮುನಿಯಂತೆ ಸ್ತುತಿಸಲು ಅರಿಯೆ
‌‌‌‌‌‌‌ ||ರುಕ್ಮಾಂಗದ||
ಬಕ ವೈರಿಯಂತೆ ಧ್ಯಾನವ ಮಾಡಲರಿಯೆ||2||
ದೇವಕಿಯಂತೆ ಮುದ್ದಿಸಲರಿಯೆನೂ
ರಂಗಾ ಕರುಣಿಸೋ ಕ್ರಷ್ಣಾ ಕರುಣಿಸೋ
||ಕರುಣಿಸೋ||

ಗರುಡನಂದದಿ ಪೊತ್ತು ತಿರುಗಲು ಅರಿಯೆ||2||
ಕರೆಯಲು ಅರಿಯೆ ಕರಿರಾಜನಂತೆ
ವರ ಕಪಿಯಂತೆ ದಾಸ್ಯವ ಮಾಡಲರಿಯೆ||2||
ಸಿರಿಯಂತೆ‌ ಮೆರೆದು ಮೋಹಿಸಲರಿಯೆ ಕ್ರಷ್ಣಾ
||ಕರುಣಿಸೋ||

ಬಲಿಯಂತೆ ದಾನವ ಕೊಡಲು ಅರಿಯೆನು||2||
ಭಕ್ತಿಛಲವನು ಅರಿಯೆ ಪ್ರಹ್ಲಾದನಂತೆ
ಒಲಿಸಲು ಅರಿಯೆ
ಅರ್ಜುನನಂತೆ ಸಖನಾಗೀ...
||ಒಲಿಸಲು||
ಸಲಹೋ ದೇವರ ದೇವ||3||
ಪುರಂದರವಿಠ್ಠಲಾ ಶ್ರೀ||3||
ಪುರಂದರವಿಠ್ಠಲಾ...||2||
||ಕರುಣಿಸೋ||

ಯಾದವ ನೀ ಬಾ ಯದುಕುಲನಂದನ Yaadava nee baa yadukula nandana

ಯಾದವ ನೀ ಬಾ ಯದುಕುಲನಂದನ
ಮಾಧವ ಮಧುಸೂದನ ಬಾರೊ || ಪ ||
ಸೋದರಮಾವನ ಮದುರಲಿ ಮಡಹಿದ
ಯಶೋದೆ ಕಂದೆ ನೀ ಬಾರೊ || ಅ. ಪ. ||

ಕನಕಾಲಂದಗಿ ಘುಲು ಘುಲು ಯೆನುತಲಿ
ಝಣಝಣ ವೆನುತಿಹ ನಾದಗಳು |
ಚಿಣಿಕೊಳು ಚೆಂಡು ಬುಗರೆಯನಾಡುತ
 ಸಣ್ಣ ಸಣ್ಣ ಗೊವಳರೊಡಿ ಬಾರೊ || ೧ ||

ಶಂಖ ಚಕ್ರವು ಕೈಯಲಿ ಹೊಳಿಯುತ
ಬಿಂಕದ ಕೋವಲ ನೀ ಬಾರೊ |
ಅಕಳಂಕ ಮಹಿಮನೆ ಆದಿನಾರಾಯಣ
ಬೇಗಂಪೆ ಭಕುತರಿಗೊಲಿ ಬಾರೊ || ೨ ||

ಖಗವಾಹನನೆ ಬಗೆಬಗೆರೂಪನೆ
ನಗೆಮೊಗದರುಶನೆ ನೀ ಬಾರೊ |
ಜಗದೊಳು ನಿನ್ನಯ ಮಹಿಮೆಯ ಪೊಗಳುವ
ಪುರಂದರವಿಠ್ಠಲ ನೀ ಬಾರೊ || ೩ ||

ಸದಾ ಎನ್ನ ಹೃದಯದಲ್ಲಿ Sadaa yenna hrudaydalli

ಸದಾ  ಎನ್ನ  ಹೃದಯದಲ್ಲಿ 
ಸದಾ  ಎನ್ನ  ಹೃದಯದಲ್ಲಿ    ವಾಸ  ಮಾಡೋ  ಶ್ರೀಹರಿ
ನಾದಮೂರ್ತಿ ನಿನ್ನ  ಪಾದ ಮೋದದಿಂದ ಭಜಿಸುವೆ  ||

ಜ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ  |
ವೇಣುಲೋಲನ  ಕುಳ್ಳಿರಿಸಿ  ಧ್ಯಾನದಿಂದ  ಭಜಿಸುವೆ  || 1 ||

ಭಕ್ತಿರಸವೆಂಬ  ಮುತ್ತು  ಮಾಣಿಕ್ಯದ  ಹರಿವಾಣದಿ 
ಮುಕ್ತನಾಗಬೇಕುಎಂದು  ಮುತ್ತಿನ  ಆರತಿ  ಎತ್ತುವೆ  || 2||

ನಿನ್ನ  ನಾನು  ಬಿಡುವನಲ್ಲ
ಎನ್ನ  ನೀನು  ಬಿಡಲು  ಸಲ್ಲ |

ಘನ್ನಮಹಿಮ  ವಿಜಯವಿಠಲ
ನಿನ್ನ  ಭಕ್ತರ  ಕೇಳೋ  ಸೊಲ್ಲ ||

ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ Kangalidyatakoo Kaaveri rangana nodada

ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ ಜ || ಪ ||
ಗಂಗಳೊಳಗೆ ಮಂಗಳ ಮೂರುತಿ
ರಂಗನ ಶ್ರೀಪಾದಂಗಳ ನೋಡದ || ಅ ಪ ||

ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲಿ ನಿಂದು
ಚಂದ್ರಪುಷ್ಕರಣಿ ಸ್ನಾನವ ಮಾಡಿ ಆ
ನಂದದಿಂದಲಿ ರಂಗನ ನೋಡದ || ೧ ||

ಹರಿಪಾದೋದಕ ಸಮ ಕಾವೇರಿ
ವಿರಜಾನದಿ ಸ್ನಾನವ ಮಾಡಿ
ಪರಮ ವೈಕುಂಠ ರಂಗಮಂದಿರ
ಪರವಾಸುದೇವನ ನೋಡದ || ೨ ||

ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರವ ಧರಿಸಿ
ತೇರನೇರಿ ಬೀದಿಲಿ
ಮೆರೆವ ರಂಗವಿಠಲನ ನೋಡದ || ೩ ||

ತುಂಗಾ ತೀರದಿ ನಿಂತ Tungaa teeradi ninta suyativaranyare

ತುಂಗಾ ತೀರದಿ ನಿಂತ ಸುಯತಿವರನ್ಯರೆ ಪೇಳಮ್ಮಯ್ಯ
ಸಂಗೀತಾಪ್ರೀಯ ಮಂಗಳ ಸುಗುಣಿತ ರಂಗ ಮುನಿಕುಲೋತ್ತುಂಗ ಪೇಳಮ್ಮ
ತುಂಗಾ ತೀರದಿ ನಿಂತ ಸುಯತಿವರನ್ಯರೆ ಪೇಳಮ್ಮಯ್ಯ

ಚಲ್ವ ಸುಮುಖ ಫಣಿಯಲ್ಲಿ ತಿಲಕ ನಾಮಗಳು ಪೇಳಮ್ಮಯ್ಯ
ಜಲಜ ಮಣಿಯು ಕೊರಳೊಲು ತುಳಸಿ ಮಾಲೆಗಳು ಪೇಳಮ್ಮಯ್ಯ
ಸುಲಲಿತ ಕಮಂಡಲ ದಂಡವನ್ನೇ ಧರಿಸಿಹನೆ ಪೇಳಮ್ಮಯ್ಯ
ಖುಲ್ಲಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನುತಾನಿಲ್ಲಿಹನಮ್ಮ

ಸುಂದರ ಚರಣರವಿಂದ ಸುಭಕುತಿಯಲಿಂದ ಪೇಳಮ್ಮಯ್ಯ
ವಂದಿಸಿ ಸ್ತುತಿಸುವ ಭೂಸುರರು ಬಲುವೃಂದ ಪೇಳಮ್ಮಯ್ಯ
ಚಂದದಲಂಕೃತಿ ಇಂದ ಶೋಭಿಸುವ ಆನಂದ ಪೇಳಮ್ಮಯ್ಯ
ಹಿಂದೆ ವ್ಯಾಸಮುನಿ ಎಂದೆನಿಸಿದ ಕರ್ಮಂದಿಗಳರಸಗ ದಿಂದ ರಹಿತನೇ

ಅಭಿನವ ಜನಾರ್ಧನ ವಿಠ್ಠಲನ ಧ್ಯಾನಿಸುವ ಪೇಳಮ್ಮಯ್ಯ
ಅಭಿವಂದಿಪರಿಗೆ ಅಖಿಲಾರ್ಥವ ಸಲ್ಲಿಸುವ ಪೇಳಮ್ಮಯ್ಯ
ನಭಮಣಿಯೆಂದದಿ ಭೂಮಿಯಲ್ಲಿ ರಾಜಿಸುವ ಪೇಳಮ್ಮಯ್ಯ
ಶುಭಗುಣ ನಿಧಿ ಶ್ರೀ ರಾಘವೇಂದ್ರ ಯತಿ
ಶುಭಗುಣ ನಿಧಿ ಶ್ರೀ ರಾಘವೇಂದ್ರ ಯತಿ ಅಭುಜ ಭಾವಾಂಡದೊಳು ಪ್ರಭಲ ಕಣಮ್ಮ

ತುಂಗಾ ತೀರದಿ ನಿಂತ ಸುಯತಿವರನ್ಯರೆ ಪೇಳಮ್ಮಯ್ಯ
ಸಂಗೀತಾಪ್ರೀಯ ಮಂಗಳ ಸುಗುಣಿತ ರಂಗ ಮುನಿಕುಲೋತ್ತುಂಗ ಪೇಳಮ್ಮ 

ಕೈಲಾಸ ವಾಸ ಗೌರೀಶ ಈಶ Kailaasa vaasa gourisha eesha

ಕೈಲಾಸ ವಾಸ ಗೌರೀಶ ಈಶ
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ

ಅಹೋರಾತ್ರಿಯಲ್ಲಿ ನಾನು ಅನುಜರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೋ ಮಹದೇವನೇ
ಅಹಿಭೂಶಣನೆ ಎನ್ನ ಅವಗುಣಗಳೆಣಿಸದಲೇ
ವಿಹಿತಧರ್ಮದಲಿ ವಿಷ್ಣು ಭಕುತಿಯನು ಕೊಡು ಶಂಭೋ
ಕೈಲಾಸ ವಾಸ ಗೌರೀಶ ಈಶ

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
ಧನುಜಗತ ಮದಹಾರಿ ದಂಡ ಪ್ರಣಾಮವ ಮಾಡ್ಪೆ
ಮಣಿಸು ಈ ಶಿರವ ಸಜ್ಜನ ಚರಣ ಕಮಲದಲ್ಲಿ
ಕೈಲಾಸ ವಾಸ ಗೌರೀಶ ಈಶ

ಭಾಗೀರಥಿಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಸರ್ವದೇವ
ಭಾಗವತಗಳ ಪ್ರಿಯ ವಿಜಯ ವಿಠಲನಂಘ್ರಿ
ಜಾಡು ಮಾಡದೆ ಭಜಿಪ ಭಾಗ್ಯವನು ಕೊಡು ಶಂಭೋ
ಕೈಲಾಸ ವಾಸ ಗೌರೀಶ ಈಶ 

ದೇವ ಬಂದ ನಮ್ಮ ಸ್ವಾಮಿ ಬಂದನೋ Deva banda namma swami bandaano

ದೇವ ಬಂದ ನಮ್ಮ ಸ್ವಾಮಿ ಬಂದನೋ
ದೇವರ ದೇವ ಶಿಖಾಮಣಿ ಬಂದನೋ ||ಪ||

ಉರಗ ಶಯನ ಬಂದ ಗರುಡ ಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದ ||

ಮಂದರಧರ ಬಂದ ಮಾಮನೋಹರ ಬಂದ
ಬೃಂದಾವನಪತಿ ಗೋವಿಂದ ಬಂದನೋ ||

ಪೂತನಿ ಸಂಹರಣ ಬಂದ ಪುರುಹೂತವಂದ್ಯ ಬಂದ
ಮಾತುಳನ ಮಡುಹಿದ ಗೋವಿಂದ ಬಂದ ||

ನಕ್ರಹರನು ಬಂದ ಚಕ್ರಧರನು ಬಂದ
ಅಕ್ರೂರಗೊಲಿದ ತ್ರಿವಿಕ್ರಮನು ಬಂದನೋ ||

ಪಕ್ಷಿವಾಹನ ಬಂದ ಲಕ್ಷ್ಮಿ ರಮಣ ಬಂದ
ಅಕ್ಷಯ ಫಲದ ಲಕ್ಷ್ಮಣಾಗ್ರಜ ಬಂದ ||

ನಿಗಮಗೋಚರ ಬಂದ ನಿತ್ಯ ತೃಪ್ತನು ಬಂದ
ನಗೆಮುಖ ಪುರಂದರ ವಿಠಲ ಬಂದನೋ


Tuesday, May 21, 2019

Nadedu Baaryya Bhava Kadalige Khumbha Sambhava

ನಡೆದು ಬಾರಯ್ಯ ಭವ ಕಡಲಿಗೆ ಕುಂಭಸಂಭವ||
ಸಡಗರದಿಂದ ಮೆಲ್ಲಡಿಯನಿಡುತ ಬೇಗ
ಎಡಬಲದಲಿ ನಿನ್ನ ಮಡದಿಯರೊಡಗೂಡಿ
ತಡಮಾಡದೆ ಬಾ ಮ್ರಡಸಖ ವೆಂಕಟ …ನಡೆದು ||

ವಿಜಯದಶಮಿ ಆಶ್ವಿಜಶುಧ್ಧ ಮಾಸದಲ್ಲಿ
ನಿಜರಥಾರೂಢನಾಗಿ, ಸುಜನರಿಂದ ಒಪ್ಪುತ
ಗಜಸಿಂಹ ,ಮಯೂರ, ಧ್ವಿಜಸಿಂಗ ಸಾರಂಗ
ಮಜಬಾಪುರೆ ಎನಲು ತ್ರಿಜಗವು ತಲೆದೂಗೇ
ಅಜನು ಸ್ತುತಿಯ ಮಾಡೆ ರುಜಗಣಾಧಿಪ ಪಡೆ
ಗಜಮುಖನಯ್ಯ ನಿಜಾನಂದದಲಾಡೆ
ಭುಜಗಶ್ರೇಷ್ಠ ಧ್ವಿಜರಾಜರು ಜಯವೆನ್ನೆ
ಕುಜನರೆದೆಯ ಮುಟ್ಟಿ ರಜತಮ ಕಲೆಯುತ ನಡೆದು….ನಡೆದು||

ದಕ್ಷಿಣ ಧಿಕ್ಕಿನಲ್ಲಿ ,ರಾಕ್ಷಸರೆದುರಾಗಿ ,
ಒಂದಕ್ಷೋಹಿಣಿ ಬಲ ,ನಿನ್ನ ಅಪೇಕ್ಷೆ ಮಾಡುತಲಿರೆ
ಪಕ್ಷಿವಾಹನನೆಣಿಸಿ ಅ ಕ್ಷಣೊದೊಲು ಖಳರ
ಶಿಕ್ಷಿಸಿ, ಸುಜನರ ರಕ್ಷಿಸಿ ಮೆರೆದಯ್ಯಾ
ತಕ್ಷಕ ನರನನು ಭಕ್ಷಿಸಬರುತಿರೆ ಈಕ್ಷಿಸಿ ತಕ್ಷಣ
ರಥನೆಲಕ್ಕೊತ್ತಿದೆ, ಲಕ್ಷೀಶನೆ ಅಕ್ಷಯ ಫಲದಾಯಕ
ಕುಕ್ಷಿಯೊಳಗೆ ಜಗರಕ್ಷಿಪ ವಿಶ್ವನೇ…..||ನಡೆದು ಬಾರಯ್ಯ||

ಮನಕೆ ಬಾರಯ್ಯ , ಸುಧಾಮನ ಸಖಹರಿಯೆ
ಸೋಮನ ಧರಿಸಿದವನೆ ,ಮನ ಕುಮುದಕೆ
ಚಂದ್ರಮನೆ ಕೇಳು ಎನ್ನ ದುಮ್ಮನವನೆ ಪರಿಹರಿಸಿ
ಒಮ್ಮನ ಕೊಡು ಅಹಿಗಿರಿ ತಿಮ್ಮನೆ ಕೇಳೊ ಬಿನ್ನಪಾ
ಕೊಂಬು ಕಹಳೆಗಳು ಬೊಂಬೋರಿಡುತಿರೆ
ತುಂಬುರು ನಾರದ ಇಂಪಾಗಿ ಪಾಡಲು
ಅಂಭರದಲಿ ವಾದನ ತುಂಬಿ ಧಿಮಿಕ್ಕೆನ್ನೆ
ಸಂಭ್ರಮದಲಿ ಬಾರೊ ಶಂಭು ವಂದಿತನೆ ನಡೆದೂ….||

ಪರಿಪರಿ ಬಗೆಯಿಂದ ಕರವ ಮುಗಿದು ಸ್ತುತಿಸಿ
ಕರೆದರೆ ಬಾರದೆ ಗರ್ವವು ಯಾಕೊ
ಕರಿಯ ಮೊರೆಯ ಕೇಳಿ, ಸಿರಿಗೆ ಹೇಳದೆ ಬಂದೆ
ಕರಿರಾಜ ಅವನಿನ್ನ ಹಿರಿಯಪ್ಪನ ಮಗನೇನೊ
ಶರಣಾಗತರಕ್ಷಕ ಮಣಿ ಎಂಬುವ
ಬಿರುದು ಬೇಕಾದರೆ ,ಸರಸರ ಬಾರಯ್ಯ,
ಗರುಡ ಗಮನ ಗೋಪಾಲ ವಿಠ್ಠಲರಾಯ
ಕರುವಿನಮೊರೆಗಾವು ನೆರೆದಂತೆ ಪೊರೆಯೊ ||

Wednesday, May 15, 2019

ಪಂಚಾಂಗಗಳು ಯಾವುವು? ಅದನ್ನ ಹೇಳುವುದರಿಂದ ನಮಗೇನು ಲಾಭ? What are Panchangas and what are the profits of telling them?

ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
ನಕ್ಷತ್ರಾದ್ಧರತೆ ಪಾಪಂ ಯೋಗಾದ್ರೋಗ ನಿವಾರಣಂ ||
ಕರಣಾತ್  ಕಾರ್ಯ ಸಿದ್ಧಿಃ ಸ್ಯಾತ ಪಂಚಾಂಗಂ ಫಲಮುತ್ತಮಂ ||

ತಿಥಿಯನ್ನು ತಿಳಿಯುವುದರಿಂದ ಸಂಪತ್ ಅಭಿವೃದ್ಧಿಯಾಗ್ತದೆ.
ವಾರವನ್ನು ತಿಳಿಯುವುದರಿಂದ ಆಯುಷ್ಯ ವರ್ಧಿಸುತ್ತದೆ.
ನಕ್ಷತ್ರ ತಿಳಿಯುವುದರಿಂದ ಪಾಪ ಹರಣವಾಗ್ತದೆ.
ಯೋಗ ತಿಳಿಯುವುದರಿಂದ ರೋಗ ನಿವಾರಣೆಯಾಗ್ತದೆ.
ಕರಣ ತಿಳಿಯುವುದರಿಂದ ಕಾರ್ಯ ಸಿದ್ಧವಾದ್ತದೆ.
 ಇದು ಪಂಚ ಅಂಗಗಳುಳ್ಳ ಪಂಚಾಂಗದ ಉತ್ತಮ ಫಲವಾಗಿದೆ.

Tuesday, May 14, 2019

Purandara daasaru virachita Sreenivasa Kalyana (Vaikunta pati tanu)

ವೈಕುಂಠ | ಪತಿ ತಾನು | ವೈಕುಂಠವನ ಬಿಟ್ಟು | ವೇಂಕಟಾದ್ರಿಗೆ ಹೋಗಿ | ಶ್ರೀಕಾಂತ ನಿಂತ | ನಾಲ್ಕೂ ಕಡೆಯೂ ನೋಡಿ | ವಲ್ಮೀಕವನೆ ಕಂಡು | ಏಕಾಂತ ಸ್ಥಳವೆಂದು | ಬಹುಕಾಲವಲ್ಲಿದ್ದ ||೧||

ಚೋಳ ಬೃತ್ಯನು ಶಿರವನೊಡೆದ ಗಾಯವ ನೋಡಿ | ತಾಳಲಾರದೆ ಸ್ವಾಮೀ | ಗುರುಗಳ ಕರೆಸಿ | ಹೇಳೀದೌಷದ ಮಾಡಿ ಕ್ರೋಡ ರೂಪಿಯ ಕಂಡು | ಕೇಳಿ ಸ್ಥಳವನೇ ಕೊಂಡು | ಲೀಲೆ ತೋರುತಲಿ ||೨||

ಇರುತಿರಲೊಂದಿನ ತುರಗ ಸ್ಮರಿಸುತಲಿ | ತುರಗ ಬರಲು ಕಂಡು | ಮುದಿದ ತಾನೇರಿ | ಪರಿಪರಿ ಮೃಗಗಳ ಅಡವಿಯಲಿ ಕೊಂದು | ಕರುಣಾಸಾಗರ ಒಂದು ವನವ ಕಂಡನು ||೩||

ವನದಲ್ಲಿ ವನಜಾಕ್ಷಿ | ರಾಜಪುತ್ರಿಯ ಕಂಡು | ಮನಕೆ ಬಂದಂತಾಡಿ | ಕಲಹಮಾಡಿದರು | ಮನಸಿಜಪಿತ ತಾನು ಅಶ್ವವ ಕಳಕೊಂಡು | ಘನವಾದ ಗಿರಿ ಏರಿ ಮಲಗಿದ ಹರಿಯು ||೪|

ನಗಧರ ಮಲಗಲು ಬಕುಳಾವತಿ ಆಗ | ಬಗೆ ಬಗೆ ಕೇಳಲು | ಶೋಕದಿ ನುಡಿದ | ಗಗನ ರಾಜನ ಪುತ್ರಿ | ಪದ್ಮಾವತಿಯ ಕಂಡು | ಹಗಲೂ ಇರುಳೂ | ಆಕೆ ಮುಖವ ಸ್ಮರಿಸುವೇನು ||೫||

ಅವಳಿಗೋಸ್ಕರವಾಗಿ | ಇದ್ದಲ್ಲಿಗೆ ಹೋದೆ | ಅವಳಿಂದ ಎನ್ನಶ್ವ ಹತವಾಯಿತಮ್ಮ || ಅವಳ ಹೊರೆತು | ಎನ್ನ ಪ್ರಾಣ ನಿಲ್ಲದು | ಅವಳ ಘಟನೆ ಮಾದಬೇಕಮ್ಮ ||೬||

ಅಂದ ಮಾತನು ಕೇಳಿ | ಬಕುಳಾವತಿ ಆಗ | ಆನಂದದಿ ರಾಜನ ಪುರಕೆ ತೆರೆಲಿದಳು | ಸುಂದರಿಯರ ಕಾರ್ಯ | ಸ್ಥಿರವಾಗದೆಂದು ಚೆಂದುಳ್ಳ ಸ್ತ್ರೀ ರೂಪ ಧರಿಸಿದ ಹರಿಯು || ೭ ||

ಕೊರವಂಜಿ ತಾನಾಗಿ | ನೃಪನ ಪುರಕ್ಕೋಗಿ | ಧಾರಿಣೀದೇವಿಯ ಮುಂದೆ ಶಕುನ ಹೇಳಿದನು | ತಿರುಗಿ ಬರಲು ರಾಜ | ಮಗಳ ಕೊಡುವನೆಂದು | ಹರಿಗೆ ನಿಶ್ಚಯಮಾಡಿ ಶುಕರ ಕಳುಹಿದನು ||೮||

ತಾಪಸೋತ್ತಮ ಬಂದು | ಪತ್ರವ ಕೊಡಲು | ಶ್ರೀಪತಿ ತಾನೋದಿ ಬೆನ್ನಿಂದೆ ಬರೆದಾ | ಅಪಾರವಂದ್ಯ ತಾನು | ಸುರಸ್ತೋಮವಕರೆಸಿ | ಈ ಪರಿ ವೈಭೋಗ ಮಾಡಿದ ಹರಿಯು ||೯||

ಆ ಕ್ಷಣದಲ್ಲಿ ತನ್ನ ತರುಣನ ಕರೆಸಿ | ಇಕ್ಷುಜಾಪನ ಮಾತೆ | ಬಳಿಗೆ ಪೋಗೆಂದ | ತಕ್ಷಣದಲ್ಲಿ ಸೂರ್ಯ | ಹೋಗಿ ನಿಲ್ಲಲು | ಅಕ್ಷೇಮವನೇ ಕೇಳಿ ತೆರಳಿ ಬಂದಳು || ೧೦ ||

ಬಂದ ಸತಿಯ ಕೂಡಿ | ಮoದಿರಕೆ ಪೋಗಿ | ಹಿಂದೆ ಹೇಳಿದ ವಾಕ್ಯ | ನಡೆಸೆಂದ ಹರಿಯು | ಸಂದೇಹವಿಲ್ಲದೆ ಸ್ವಾಮೀ ನಡೆಸೆಂದು | ಇಂದಿರಾದೇವಿಯು | ನುಡಿದಳು ಹರಿಗೆ || ೧೧ ||

ಸ್ವಸ್ತಿ ವಾಚನ ಮಾಡಿ | ಕುಲದೇವರನಿಟ್ಟು | ಪ್ರಸ್ಥವ ಮಾಡಿದ ದ್ವಿಜರ ಸ್ತೋಮಕ್ಕೆ | ಮರುದಿನ ಲಕ್ಷ್ಮೀಶ | ರಾಜನ ಪುರಕೆ ಸುರಸ್ತೋಮವನೇ ಕೂಡಿ ತೆರಳಿ ಬಂದನು || ೧೨ ||

ಬರುವ ಕೃಷ್ಣನ ಕಂಡು | ಶುಕಮುನಿ ಸ್ತುತಿಸಿ | ಹರಿಗೆ ಭೋಜನವನ್ನಲ್ಲಿ | ಮುದದಿ ಮಾಡಿಸಿದ | ಅಕಳಂಕ ಮಹಿಮನು | ಬಂದ ವಾರ್ತೆಯ ಕೇಳಿ | ಸಕಲ ಜನರ ಕೂಡಿ | ಕರೆ ಬಂದ ರಾಜ || ೧೩|

ಮುದದಿಂದ | ಎದುರ್ಗೊಂಡು | ಪರಿಮಳಪೂಸಿ | ಸದಮಲ ಹೃದಯನ ಕರೆತಂದರು ಮನೆಗೆ | ಪದ್ಮನಾಭನ ಪೀಠದಲ್ಲಿ ಕುಳ್ಳಿರಿಸಿ | ಮಧುರ ಮಾತಿಲಿ | ತನ್ನ ತರುಣಿ ಒಡಗೂಡಿ || ೧೪||

ಹೇಮಕುಂಭಗಳಿಂದ | ದ್ವಿಜರ ಕೈಯೊಳು | ಸ್ವಾಮಿ ಪುಷ್ಕರಣೀಯ ತೋಯವ ತರಿಸಿ | ಹೇಮ ತಟ್ಟೆಯಲ್ಲಿ | ಸ್ವಾಮಿ ಪಾದವನ್ನಿತ್ತು |ಪ್ರೆಮದಿಂದಭಿಷೇಕ ಮಾಡಿದ ರಾಜ ||೧೫ ||

ಚಿನ್ನದ ಕಿರೀಟ| ಆಭರಣವನ್ನಿಟ್ಟು | ಕನ್ಯಾದಾನವ ಮಾಡಿ | ಧನ್ಯ ತಾನಾದ | ತನ್ನ ಮಗಳ ಶ್ರೀನಿವಾಸಗೋಪ್ಪಿಸಿ | ಉನ್ನತ ಪದವಿಯ ಚೆನ್ನಾಗಿ ಪಡೆದ ||೧೬ ||

ಮಾವನಪ್ಪಣೆ ಕೊಂಡು | ವಸುಧಾನ ಗೋಸ್ತ್ರವ ಕೊಟ್ಟು | ಭಾವ ಶುದ್ದದಿ ತನ್ನ
ಮಾವಗೊಂದಿಸಿದ | ಯಾವಾಗ ಕರೆದರೂ | ಬರುವೆ ನಾನೆಂದು | ಪಾವನ ಮಾಡೆಂದು ಧರಿನಿಗೊಂದಿಸಿದ ||೧೭||

ಅಷ್ಟಗೋಪುರ ಏರಿ | ಕಣ್ಣಿಟ್ಟು ನೋಡುತಲಿ | ಎಷ್ಟು ಹೇಳಲಿ ಈಕೆ ಸುಕೃತಫಲವೆಂತು | ಅಜ ರುದ್ರ ಮೊದಲಾದ ಸುರರು ದ್ವಿಜರೆಲ್ಲ | ಸುಜನದಂದಣವೆರಿ| ಪುರಕೆ ಸಾಗಿದರು || ೧೮||

ಆರು ತಿಂಗಳು ಮೀರಿ |ಗಿರಿಗೆ ಪೊಗುವೆನೆಂದು | ಧೀರ ತಾನಿಂತನೆ |
ಕುಂಭಪುತ್ರರಾಶ್ರಮದಿ| ಧರೆಯೊಳು ಅಣಕೆರಿ ಸುರಪತಿ ಪ್ರಿಯನಾದ | ಸುಗುಣ ವೆಂಕಟನ್ನ ಪುರಂಧರ ವಿಠಲಾ ||

-- ಕೃಷ್ಣಾರ್ಪಣಮಸ್ತು --